top of page

ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್...!!

ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್...!!

ಮುಂಬಯಿ : ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ಗುರುವಾರ (ಜ.16) ನಸುಕಿನಲ್ಲಿ ನಡೆದ ದಾಳಿಯು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅತೀ ಭದ್ರತೆ ಇದ್ದರೂ ಕೂಡಾ, ಆ ಆಗುಂತಕ ಮನೆಯೊಳಗೆ ಬಂದಿದ್ದಾರೂ ಹೇಗೆ ? ಸಿಸಿಟಿವಿ ಕ್ಯಾಮರಾದಲ್ಲಿ ಯಾಕೆ ಸೆರೆಯಾಗಲಿಲ್ಲ? ದರೋಡೆ ಮಾಡಲು ಬಂದಿದ್ದನೇ ? ಸೈಫ್ ಅವರ ಜೀವ ತೆಗೆಯುವ ಉದ್ದೇಶವಿತ್ತೇ? ಹೀಗೆ ಹಲವು ಪ್ರಶ್ನೆಗಳು ಎದುರಾಗಿವೆ.

ಸದ್ಯದ ಮುಂಬೈನ ಲೀಲಾವತಿ ಆಸ್ಪತ್ರೆಯ ಮಾಹಿತಿಯ ಪ್ರಕಾರ, ಬಾಲಿವುಡ್ ನಟ ಅಪಾಯದಿಂದ ಪಾರಾಗಿದ್ದಾರೆ. ನಸುಕಿನ ಸುಮಾರು ಮೂರು ಗಂಟೆಗೆ ಆರಂಭವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಈ ನಡುವೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದೆ ಎಂದು ಹೇಳಲಾಗುತ್ತಿದೆ.

ಅವರ ಮನೆಗೆ ಅಷ್ಟೊಂದು ಭದ್ರತೆಯಿದ್ದರೂ ಆಗಂತುಕ ಒಳಗೆ ನುಗ್ಗಿದ್ದು ಹೇಗೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳನ್ನೂ ವಿಚಾರಣೆಗೆ ಒಳಪಡಿಸಿ, ಹೇಳಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸೈಫ್ ಆಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಯಾರು ಎನ್ನುವುದು ಮನೆಯ ಸಿಬ್ಬಂದಿಯೊಬ್ಬರಿಗೆ ಗೊತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈತನೇ, ಆಗಂತುಕನನ್ನು ಮನೆಯೊಳಗೆ ಸೇರಿಸಲು ಸಹಾಯ ಮಾಡಿದ್ದು ಎಂದೂ ವರದಿಯಾಗಿದೆ. ಮನೆಯೊಳಗೆ ಸಿಕ್ಕ ಬೆಂಬಲದಿಂದಲೇ, ಆತ ಮನೆಯೊಳಗೆ ಪ್ರವೇಶಿಸಲು ಸಹಾಯವಾಯಿತು ಎಂದು ಹೇಳಲಾಗಿದೆ.

ಘಟನೆ ನಡೆಯುವ ಎರಡು ತಾಸಿಗೆ ಮುನ್ನ ಯಾರೊಬ್ಬರು ಮನೆಯೊಳಗೆ ಪ್ರವೇಶಿಸಿಲ್ಲ ಎನ್ನುವುದು ಸಿಸಿಟಿವಿಯ ಫೂಟೇಜ್ ನಲ್ಲಿ ಖಚಿತವಾಗಿದೆ. ಆದರೆ, ದಾಳಿ ಮಾಡಲು ಬಂದವನನ್ನು ಅದಕ್ಕಿಂತಲೂ ಮೊದಲೇ, ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ. ಇದೊಂದು ಅಕಸ್ಮಾತ್ ಆಗಿರುವ ಘಟನೆ ಅಲ್ಲ ಎಂದು ಮಾಧ್ಯಮವು ಅಭಿಪ್ರಾಯ ಪಟ್ಟಿದೆ.

ಬಾಂದ್ರಾದ ಹನ್ನೊಂದಲೇ ಮಹಡಿಯಲ್ಲಿ ನಿದ್ರಿಸುತ್ತಿದ್ದ ಸೈಫ್ ಆಲಿ ಖಾನ್, ದಾಳಿಯಾಗುವ ಸಾಧ್ಯತೆ ಅರಿತ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ತನ್ನ ಮೇಲೆ ದಾಳಿ ಆಗುವುದನ್ನು ತಪ್ಪಿಸಿಕೊಳ್ಳಲು ಸೈಫ್, ಪ್ರಯತ್ನಿಸಿದರೂ ಆರು ಬಾರಿ ಆಗಂತುಕ ಅವರ ಮೇಲೆ ಇರಿದಿದ್ದ. ಆ ವೇಳೆ, ಪತ್ನಿ ಕರೀನಾ ಕಪೂರ್ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

ಮಧ್ಯರಾತ್ರಿ 2.30ರ ಸುಮಾರಿಗೆ ಸೈಫ್ ಮೇಲೆ ದಾಳಿ ನಡೆದಿದೆ. ಸಹೋದರಿ ಕರಿಷ್ಮಾ ಕಪೂರ್, ಗೆಳತಿಯರಾದ ಸೋನಂ ಮತ್ತು ರಿಹಾ ಕಪೂರ್ ಜೊತೆಗೆ ಡಿನ್ನರ್ ಗೆ ಹೋಗಿದ್ದ ಸೈಫ್ ಪತ್ನಿ ಕರೀನಾ ಕಪೂರ್ , ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ವರದಿಯಾಗಿದೆ. ಮೂರು ಗಂಟೆ ಸುಮಾರಿಗೆ ಬಾಂದ್ರಾ ಪೊಲೀಸರಿಗೆ ಮಾಹಿತಿಯನ್ನು ತಿಳಿಸಲಾಗಿದೆ. ಪೊಲೀಸರ ಖಚಿತ ಅನುಮಾನದ ಪ್ರಕಾರ, ಮನೆಯ ನೌಕರರೊಬ್ಬರಿಗೆ ದಾಳಿ ಮಾಡಲು ಬಂದವನ ಪರಿಚಯವಿದೆ ಎನ್ನುವುದು. ಈ ಆಯಾಮವನ್ನೇ ಬಲವಾಗಿ ಇಟ್ಟುಕೊಂಡು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.

ಸಿಸಿಟಿವಿ ಫೂಟೇಜ್ ಪರಿಶೀಲಿಸುವುದರ ಜೊತೆಗೆ ಮನೆಯ ನೌಕರರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡುವಾ ಉದ್ದೇಶವನ್ನು ಇಟ್ಟುಕೊಂಡೇ, ಸಂಜೆಯ ಸುಮಾರಿಗೆ ಆಗಂತುಕ ಮನೆಗೆ ಎಂಟ್ರಿಯಾಗಿರಬಹುದು ಎನ್ನುವ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಟುಂಬದವರ ಪ್ರಕಾರ ಇದೊಂದು ದರೋಡೆ ನಡೆಸುವ ಪ್ರಯತ್ನ ಎಂದು ಹೇಳಿದ್ದರೂ, ಪೊಲೀಸರಿಗೆ ಇದರ ಹಿಂದೆ ಬೇರೇನೋ ಇದೆ ಎನ್ನುವ ಅನುಮಾನ ಎದುರಾಗಿದೆ. ಬಲವಂತವಾಗಿ ಒಬ್ಬರು ಮನೆಯೊಳಗೆ ನುಗ್ಗಿದ ಸಾಕ್ಷಿ ಪೊಲೀಸರಿಗೆ ಲಭ್ಯವಾಗಿದೆ. ಇದು, ಒಳಗಿನವರ ಕೈವಾಡ ಎನ್ನುವ ಅನುಮಾನ ಪೊಲೀಸರಿಗೆ ಇನ್ನಷ್ಟು ಹೆಚ್ಚಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಎಮರ್ಜೆನ್ಸಿ ಎಕ್ಸಿಟ್ ಮೂಲಕ ಆಗಂತುಕ ಮನೆಯೊಳಗೆ ಪ್ರವೇಶಿಸಿದ್ದಾನೆ, ಹಾಗಾಗಿ ಈತನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿರುವುದಿಲ್ಲ. ಆರಂಭಿಕವಾಗಿ ಇದೊಂದು ದರೋಡೆ ಪ್ರಯತ್ನ ಎನಿಸಿದರೂ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಒಬ್ಬ ಆರೋಪಿಯನ್ನು ಪತ್ತೆಹಚ್ಚಲಾಗಿದೆ, ಈತನನ್ನು ಬಂಧಿಸಲು ಹತ್ತು ತಂಡವನ್ನು ರಚಿಸಲಾಗಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಂ ಹೇಳಿದ್ದಾರೆ.

Comentários


Top Stories

bottom of page