ಸೋಲಿಗೆ ಸೇಡು ತೀರಿಸಿಕೊಂಡ ಭಾರತ ; ಪಾಕಿಸ್ತಾನ ಟೂರ್ನಿಯಿಂದ ಔಟ್...!!
ಸೋಲಿಗೆ ಸೇಡು ತೀರಿಸಿಕೊಂಡ ಭಾರತ ; ಪಾಕಿಸ್ತಾನ ಟೂರ್ನಿಯಿಂದ ಔಟ್...!!

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಅಜೇಯ ಓಟ ಮುಂದುವರೆದಿದೆ. ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ, ತನ್ನದೇ ತವರಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆಯಾದರೂ, ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬೀಳುವ ಅಂಚಿನಲ್ಲಿದೆ.
ಈ ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ಏಕೆಂದರೆ ಸಂಕಷ್ಟದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಮೊದಲ ವಿಕೆಟ್ಗೆ 41 ರನ್‌ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಬಾಬರ್ ಆಝಂ ಬಂದ ತಕ್ಷಣ ಕೆಲವು ಅತ್ಯುತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಪಾಕಿಸ್ತಾನಕ್ಕೆ ನಿರೀಕ್ಷೆಗಿಂತ ಉತ್ತಮ ಆರಂಭವನ್ನು ನೀಡಿದ್ದರಿಂದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್‌ಗಾಗಿ ಸ್ವಲ್ಪ ಕಾಯಬೇಕಾಯಿತು. ಆದರೆ ಹಾರ್ದಿಕ್ ಪಾಂಡ್ಯ ಬಾಬರ್ ಅವರ ವಿಕೆಟ್ ಪಡೆಯುವ ಮೂಲಕ ಪಾಕ್ ತಂಡಕ್ಕೆ ಮೊದಲ ಆಘಾತ ನೀಡಿದರು. ಬಾಬರ್ ಔಟಾದ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಇಮಾಮ್ ಉಲ್ ಹಕ್ ಕೂಡ ಮುಂದಿನ ಓವರ್‌ನಲ್ಲಿ ಔಟಾದರು. ಇಲ್ಲಿಂದ ಪಾಕಿಸ್ತಾನ ತಂಡ ಸಂಕಷ್ಟದಲ್ಲಿರುವಂತೆ ಕಂಡಿತು ಆದರೆ ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಸ್ಥಿರಗೊಳಿಸಿದರು. ಒಟ್ಟಾಗಿ ಅವರು ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಇಬ್ಬರು ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಪಾಕಿಸ್ತಾನ ತಂಡವು ದೊಡ್ಡ ಸ್ಕೋರ್ ಕಡೆಗೆ ಸಾಗುತ್ತಿರುವಂತೆ ಕಾಣಲಿಲ್ಲ. ಸೌದ್ ಶಕೀಲ್ ಅದ್ಭುತ ಅರ್ಧಶತಕ ಬಾರಿಸಿದರೆ, ರಿಜ್ವಾನ್ ಅರ್ಧಶತಕದಂಚಿನಲ್ಲಿ ಎಡವಿದರು. ಇಬ್ಬರೂ ಔಟಾದ ನಂತರ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಿತು. ಕೊನೆಯಲ್ಲಿ ಖುಸ್ದಿಲ್ ಷಾ ಹೊಡಿಬಡಿ ಆಟದ ಮೂಲಕ ತಂಡವನ್ನು 241 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
ಪಾಕ್ ನೀಡಿದ 241 ರನ್‌ಗಳ ಗೆಲುವಿನ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಮತ್ತೊಮ್ಮೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಪಾಕ್ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಎಸೆತಗಳಲ್ಲಿ ಬೌಂಡರಿಗಳನ್ನು ಕಲೆಹಾಕಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಆದರೆ ಶಾಹೀನ್ ಎಸೆದ ಅದ್ಭುತ ಯಾರ್ಕರ್‌ಗೆ ರೋಹಿತ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ಆದರೆ ರೋಹಿತ್ ವಿಕೆಟ್ ಬಳಿಕವೂ ತನ್ನ ನೈಜ ಆಟವನ್ನು ಮುಂದುವರೆಸಿದ ಶುಭ್ಮನ್ ಗಿಲ್, ಶಾಹೀನ್ ಮೇಲೆ ದಾಳಿ ಮಾಡಿ ಸತತ 2 ಓವರ್‌ಗಳಲ್ಲಿ 5 ಬೌಂಡರಿಗಳನ್ನು ಬಾರಿಸಿದರು. ಮತ್ತೊಂದೆಡೆ, ಕೊಹ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಬಾರಿಸಿದರು. ಈ ಇಬ್ಬರ ನಡುವೆ ಉತ್ತಮ ಜತೆಯಾಟ ಕಂಡುಬಂತು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಗಿಲ್ ತಂಡವನ್ನು 100 ರನ್‌ಗಳ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಪಾಕಿಸ್ತಾನ ವಿರುದ್ಧ ತಮ್ಮ ಅತ್ಯುತ್ತಮ ದಾಖಲೆಯನ್ನು ಮುಂದುವರೆಸಿದ ಕೊಹ್ಲಿ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್‌ಗೆ ಅಡಿಪಾಯ ಹಾಕಿದರು. ಗಿಲ್ ಔಟಾದ ನಂತರ, ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ರನ್ ಚೇಸ್ ಜವಾಬ್ದಾರಿಯನ್ನು ವಹಿಸಿಕೊಂಡು ಅದ್ಭುತ ಅರ್ಧಶತಕ ದಾಖಲಿಸಿದರು. ಇತ್ತ ಗಿಲ್ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ ಆರಂಭದಲ್ಲಿ ರನ್ ಕಲೆಹಾಕಲು ಪರೆದಾಡಿದರಾದರೂ, ಕ್ರೀಸ್ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಪಾಕ್ ಬೌಲರ್‌ಗಳನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಅಯ್ಯರ್ ಅರ್ಧಶತಕ ಬಾರಿಸಿ ಔಟಾದರೆ, ಕೊಹ್ಲಿ ಮಾತ್ರ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದಲ್ಲದೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

Comments