ಮಂಗಳೂರು : ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ವೃದ್ಧೆಯ 1.35 ಕೋಟಿ ರೂಪಾಯಿ ಬಚಾವ್...! ; ಡಿಜಿಟಲ್ ಅರೆಸ್ಟ್ ಗೆ ಯತ್ನಿಸಿದ ಖದೀಮರು..!
ಮಂಗಳೂರು : ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ವೃದ್ಧೆಯ 1.35 ಕೋಟಿ ರೂಪಾಯಿ ಬಚಾವ್...!
ಡಿಜಿಟಲ್ ಅರೆಸ್ಟ್ ಗೆ ಯತ್ನಿಸಿದ ಖದೀಮರು..!
ಮಂಗಳೂರು ನಗರದ ಬ್ಯಾಂಕೊಂದರ ಶಾಖಾ ವ್ಯವಸ್ಥಾಪಕರ ಸಕಾಲಿಕ ಎಚ್ಚರಿಕೆ ಕ್ರಮಗಳಿಂದಾಗಿ ವೃದ್ಧೆಯೊಬ್ಬರು ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾಗುವುದು ತಪ್ಪಿದೆ.
ಸೈಬರ್ ವಂಚಕರ ಬಲೆಗೆ ಸಿಲುಕಿ "ಡಿಜಿಟಲ್ ಅರೆಸ್ಟ್" ಆಗಿದ್ದ ವೃದ್ಧೆಯೊಬ್ಬರನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಮಂಗಳೂರು ಕಂಕನಾಡಿ ಶಾಖಾ ವ್ಯವಸ್ಥಾಪಕರು ಬಚಾವ್ ಮಾಡಿದ್ದಾರೆ.
ಶಾಖೆಗೆ ಬಂದಿದ್ದ ಈ ವೃದ್ಧೆ ತಾವಿರಿಸಿದ್ದ 1.35 ಕೋಟಿ ರೂ.ಗಳನ್ನು ಕೂಡಲೇ ಮರಳಿಸುವಂತೆ ಕೋರಿದ್ದರು. ಈಕೆ ಬಹಳ ಆತಂಕದಲ್ಲಿರುವುದು ಹಾಗೂ ಪದೇ ಪದೆ ಯಾರೊಂದಿಗೋ ಕರೆಯಲ್ಲಿ ನಿರತರಾಗಿರುವುದನ್ನು ಗಮನಿಸಿದ ಶಾಖೆಯ ವ್ಯವಸ್ಥಾಪಕರಿಗೆ ವೃದ್ಧೆಗೆ ಬಂದಿರುವುದು ಸೈಬರ್ ವಂಚಕರ ಕರೆ ಎಂದು ಗೊತ್ತಾಯಿತು. ಈ ವಿಷಯವನ್ನು ವೃದ್ಧೆಗೆ ಮನದಟ್ಟು ಮಾಡಿದ ಮ್ಯಾನೇಜರ್ ಮಂಗಳೂರಿನ ನಗರದ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ ಆ ನಂಬರ್ ಬ್ಲಾಕ್ ಮಾಡಿಸಿ ವೃದ್ಧೆಗೆ ನೆರವಾಗಿದ್ದಾರೆ.
ಡಿಜಿಟಲ್ ಅರೆಸ್ಟ್ ಯತ್ನವಿಫಲ : ವಂಚಕರು ವೃದ್ಧೆಗೆ ಕರೆ ಮಾಡಿ ತಾವು ಪೊಲೀಸ್ ಅಧಿಕಾರಿಗಳು ಎಂದು ವಂಚಿಸಲು ಪ್ರಯತ್ನಿಸಿದ್ದರು. "ಇ.ಡಿ. ದಾಳಿಯಲ್ಲಿ ವಿವಿಧ ಗ್ರಾಹಕರಿಗೆ ಸೇರಿದ 300-400 ಡೆಬಿಟ್ ಕಾರ್ಡ್‌ಗಳು ಸಿಕ್ಕಿದ್ದು, ಅದರಲ್ಲಿ ಒಂದು ನಿಮ್ಮದು. ನಿಮ್ಮ ಖಾತೆಯನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಲಾಗುತ್ತಿದ್ದು, ತನಿಖೆ ಮಾಡಲಾಗುತ್ತಿದೆ" ಎಂದು ಖದೀಮರು ನಂಬಿಸಿದ್ದರು. "ಈ ಬಗ್ಗೆ ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್ ಇದೆ" ಎಂದು ಸುಳ್ಳು ವಾರಂಟನ್ನು ಕೂಡ ವೀಡಿಯೋ ಕರೆಯ ಮೂಲಕ ಪ್ರದರ್ಶಿಸಿದ್ದರು. ಇದನ್ನು ನಂಬಿದ್ದ ವೃದ್ಧೆ ಆತಂಕದಿಂದ ಹಣ ನೀಡಲು ಮುಂದಾಗಿದ್ದರು.
ಡಿಜಿಟಲ್ ಅರೆಸ್ಟ್ ಎಂದರೇನು? : ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ವಂಚಕರು ವ್ಯಕ್ತಿಗಳು ಅಥವಾ ಉದ್ಯಮಿಗಳಿಗೆ ಕಾನೂನು ಜಾರಿ ಅಥವಾ ಸರಕಾರಿ ಅಧಿಕಾರಿಗಳು ಎಂದು ತೋರಿಸಿಕೊಳ್ಳುತ್ತಾರೆ. ಬಲಿಪಶುಗಳನ್ನು ತೆರಿಗೆ ವಂಚನೆ, ನಿಯಮ ಉಲ್ಲಂಘನೆ ಅಥವಾ ಹಣಕಾಸು ದುರುಪಯೋಗ ಎಂದು ಆರೋಪಿಸಿ ಡಿಜಿಟಲ್ ಅರೆಸ್ಟ್ ವಾರಂಟ್ ಮೂಲಕ ಬೆದರಿಸುತ್ತಾರೆ. ವಂಚಕರು ಡಿಜಿಟಲ್ ಅರೆಸ್ಟ್ ವಾರಂಟ್ ಹಿಂಪಡೆಯಲು "ಸೆಟ್ಲಮೆಂಟ್ ಶುಲ್ಕ" ಅಥವಾ "ದಂಡ" ಎಂದು ಹೇಳಿ ಹಣಕ್ಕಾಗಿ ಆಗ್ರಹಿಸುತ್ತಾರೆ. ಒಮ್ಮೆ ಹಣ ಪಾವತಿಯಾದ ನಂತರ ವಂಚಕರು ಏನೂ ಗುರುತು ಬಿಡದೆ ಕಣ್ಮರೆಯಾಗುತ್ತಾರೆ.
Comments