top of page

ವಿಮಾ ಪಾಲಿಸಿಗಳ ನಾಮಿನಿಗಳಿಗೆ ನಗದು ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿಲ್ಲ - ಹೈಕೋರ್ಟ್ ಮಹತ್ವದ ಆದೇಶ

ವಿಮಾ ಪಾಲಿಸಿಗಳ ನಾಮಿನಿಗಳಿಗೆ ನಗದು ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿಲ್ಲ - ಹೈಕೋರ್ಟ್ ಮಹತ್ವದ ಆದೇಶ

ವಿಮಾ ಪಾಲಿಸಿಗಳ ಪರಿಹಾರ ಮೊತ್ತಕ್ಕಾಗಿ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ್ದಲ್ಲಿ ವಿಮೆಯ ನಾಮಿನಿಗೆ ಸಂಪೂರ್ಣ ಪರಿಹಾರ ಪಡೆಯುವ ಹಕ್ಕಿಲ್ಲಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಮಗನ ವಿಮೆಗೆ ನಾಮನಿರ್ದೇಶಿತ­ರಾಗಿದ್ದ ನೀಲವ್ವ ಸಲ್ಲಿಸಿದ್ದ ಅರ್ಜಿ ಕುರಿತು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ.ಅನಂತ್‌ ರಾಮನಾಥ್‌ ಹೆಗಡೆ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

"ನಾಮನಿರ್ದೇಶನಗಳನ್ನು ನಿಯಂತ್ರಿ­ಸುವ ವಿಮಾ ಕಾಯಿದೆ 1938ರ ಸೆಕ್ಷನ್‌ 39 ವೈಯಕ್ತಿಕ ಉತ್ತರಾಧಿಕಾರ ಕಾನೂನಾಗಿರುವ ಹಿಂದೂ ಉತ್ತರಾಧಿಕಾರ ಕಾಯಿದೆ 1956 ಅನ್ನು ಅತಿಕ್ರಮಣ ಮಾಡುವುದಿಲ್ಲ. ಹಾಗಾಗಿ, ವಿಮೆಯ ನಾಮ ನಿರ್ದೇಶಿತ­ರು(ನಾಮಿನಿಗಳು) ಹೇಗೆ ವಿಮೆ ಯಿಂದಾಗುವ ಪ್ರಯೋಜ­ನ­ಗಳನ್ನು ಪಡೆಯಲು ಅರ್ಹರಾಗಿರುತ್ತಾರೋ, ಹಾಗೆಯೇ ವಿಮಾದಾರನ ಉತ್ತರಾಧಿಕಾರಿಗಳು ಕೂಡ ಆ ಸೌಲಭ್ಯಗಳನ್ನು ಪಡೆಯುವ ಸಮಾನ ಹಕ್ಕು ಹೊಂದಿರು­ತ್ತಾರೆ" ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಆದೇಶದಲ್ಲಿಉಲ್ಲೇಖಿಸಿರುವ ನ್ಯಾಯ­ಪೀಠ "ಯಾವುದೇ ವ್ಯಕ್ತಿಯ ವಿಮೆಗೆ ತಾಯಿಯನ್ನು ನಾಮನಿರ್ದೇಶನ ಮಾಡಿ ಮೃತಪಟ್ಟಲ್ಲಿ ಮೃತರ ಪತ್ನಿ, ಮಗು ಮತ್ತು ತಾಯಿ ಪರಿಹಾರವನ್ನು ಮೂರನೇ ಒಂದು ಭಾಗದಂತೆ ಹಂಚಿಕೊಳ್ಳಬೇಕು" ಎಂದಿದೆ.

ಅಲ್ಲದೆ "ವಿಮಾ ಪರಿಹಾರಗಳನ್ನು ಪಡೆಯುವ ಸಂಬಂಧ ನಾಮನಿರ್ದೇಶಕರು ಹಾಗೂ ಉತ್ತರಾಧಿಕಾರಿಗಳಲ್ಲಿನ ವ್ಯತ್ಯಾಸ ಕುರಿತಂತೆ ಭಾರತೀಯ ಕಾನೂನು ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಈ ಅಂಶಗಳನ್ನು ಸಂಸತ್ತು ಕಾನೂನ­ನ್ನಾಗಿ ಮಾಡಿಲ್ಲ. ಹೀಗಾಗಿ, ನಾಮನಿರ್ದೇ­ಶಿತರನ್ನು ಸ್ವಯಂಚಾಲಿತ ಪ್ರಯೋಜನಕಾರಿ ನಾಮನಿರ್ದೇಶಿತರೆಂದು ಪರಿಗಣಿಸಲು ಆದೇಶಿಸುವುದಕ್ಕೆ ಸಾಧ್ಯವಿಲ್ಲ" ಎಂದು ನ್ಯಾಯಪೀಠ ಹೇಳಿದೆ.


ಪ್ರಕರಣದ ಹಿನ್ನೆಲೆ

ರವಿ ಸೋಮನಕಟ್ಟಿ ಎಂಬುವರು 16 ಲಕ್ಷ ಮತ್ತು 2 ಲಕ್ಷ ರೂ.ಗಳ ಎರಡು ಜೀವ ವಿಮಾ ಪಾಲಿಸಿ ಮಾಡಿಸಿದ್ದರು. ಈ ವಿಮೆಗಳಿಗೆ ಅವರ ತಾಯಿಯನ್ನು ನಾಮಿನಿಯನ್ನಾಗಿ ಮಾಡಿದ್ದರು. ಮದುವೆಯಾಗಿ ಮಗು ಜನಿಸಿದ್ದರೂ, ರವಿ ಅವರು ನಾಮಿನಿಯಲ್ಲಿ ಬದಲಾವಣೆ ಮಾಡಿರಲಿಲ್ಲ. 2019ರ ಡಿ.29ರಂದು ರವಿ ಮೃತಪಟ್ಟಿದ್ದರು. ಬಳಿಕ ಪತ್ನಿ ಹಾಗೂ ಮಗ ಇಬ್ಬರೂ ಸೇರಿ ವಿಮೆಗೆ ನಾಮಿನಿಯಾಗಿರುವ ಮೃತರ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿ ವಿಮಾ ಮೊತ್ತದಲ್ಲಿ ಪಾಲು ನೀಡುವಂತೆ ಮನವಿ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ವಿಮೆಯ ಸಂಪೂರ್ಣ ಮೊತ್ತ ನಾಮಿನಿಯ ಹಕ್ಕು ಎಂದು ಅಭಿಪ್ರಾಯಪಟ್ಟು, ರವಿ ಅವರ ತಾಯಿ, ಪತ್ನಿ ಹಾಗೂ ಮಗನಿಗೆ ಮೂರನೇ ಒಂದು ಭಾಗವನ್ನು ಪಾಲು ಪಡೆಯುವುದಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿತ್ತು. ಅದನ್ನು ಪ್ರಶ್ನಿಸಿ ತಾಯಿ ನೀಲವ್ವ ಹೈಕೋರ್ಟ್‌ ಮೆಟ್ಟಿಲೇರಿದ್ದರು.


댓글


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page