ಕುಂಭಮೇಳದಲ್ಲಿ ಸ್ವಾಮೀಜಿಯಾಗಿ ಪ್ರತ್ಯಕ್ಷವಾದ ರಾಯಚೂರಿನ ಮಾಜಿ ಜಿಲ್ಲಾಧಿಕಾರಿ
ಕುಂಭಮೇಳದಲ್ಲಿ ಸ್ವಾಮೀಜಿಯಾಗಿ ಪ್ರತ್ಯಕ್ಷವಾದ ರಾಯಚೂರಿನ ಮಾಜಿ ಜಿಲ್ಲಾಧಿಕಾರಿ
ನಿವೃತ್ತಿ ಬಳಿಕ ಸನ್ಯಾಸ ಸ್ವೀಕರಿಸಿದ್ದ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಐ.ಆರ್.ಪೆರುಮಾಳ್ ಕುಂಭಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ತಮಿಳುನಾಡು ಮೂಲದ ಪೆರುಮಾಳ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ ಪೆರುಮಾಳ್ ಅವರು 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸೇವೆಯಿಂದ 2012ರಲ್ಲಿ ನಿವೃತ್ತಿ ಪಡೆದ ಬಳಿಕ ಕೆಲಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಸೇರಿ, 2013ರ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
2013ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ, ಮರುವರ್ಷ ಅಂದರೆ 2014ರಲ್ಲಿ ಸನ್ಯಾಸ ಸ್ವೀಕರಿಸಿ, ಶಿವಯೋಗಿ ಪೆರುಮಾಳ್ ಸ್ವಾಮೀಜಿ ಎಂದು ನಾಮಕರಣಗೊಂಡಿದ್ದರು. ಬಾಲ್ಯದಿಂದಲೂ ಶಿವ - ಪಾರ್ವತಿ ಭಕ್ತರಾಗಿದ್ದ ಅವರು, ತಮಿಳುನಾಡಿನ ತಮ್ಮ ಹುಟ್ಟೂರಿನಲ್ಲಿ ಶಿವನ ಭವ್ಯ ಮಂದಿರವನ್ನೂ ಕಟ್ಟಿಸಿದ್ದಾರೆ.
Comments