ಸೈಫ್ ಅಲಿ ಖಾನ್ ಕೇಸ್‌ಗೆ ಬಿಗ್ ಟ್ವಿಸ್ಟ್ : ಘಟನೆಯ ಇಂಚಿಂಚೂ ವಿವರ ಇಲ್ಲಿದೆ...!!
ಸೈಫ್ ಅಲಿ ಖಾನ್ ಕೇಸ್‌ಗೆ ಬಿಗ್ ಟ್ವಿಸ್ಟ್ : ಘಟನೆಯ ಇಂಚಿಂಚೂ ವಿವರ ಇಲ್ಲಿದೆ...!!
ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಘಟನೆ ನಡೆದು 50ಕ್ಕೂ ಅಧಿಕ ಗಂಟೆಗಳಾಯಿತು. ಆದರೆ ಈವರೆಗೂ ಸರಿಯಾದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದು ಸಿಸಿಟಿವಿಯಲ್ಲಿ ಕಂಡು ಬಂದ ಹಂತಕನ ಬೆನ್ನು ಬಿದ್ದಿದ್ದಾರೆ. ಈ ನಡುವೆ ಪೊಲೀಸರು ಸೈಫ್ ಪತ್ನಿ ಕರೀನಾ ಕಪೂರ್ ಮತ್ತು ಸೈಫ್‌ನ ಆಸ್ಪತ್ರೆ ಕರೆತಂದ ಆಟೋ ಚಾಲಕನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಕಳ್ಳತನ ಮುಖ್ಯ ಉದ್ದೇಶವಾಗಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿದ ಘಟನೆ ಸಂಭವಿಸಿ ಐವತ್ತಕ್ಕೂ ಅಧಿಕ ಗಂಟೆಗಳಾಯಿತು ಆದರೆ ಇನ್ನು ಸರಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಶಂಕಿತನೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈತ ಚಾಕು ಇರಿದ ವ್ಯಕ್ತಿ ಅಲ್ಲ. ಈತನಿಗೂ ಸೈಫ್ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಚಾಕು ಇರಿದನಿಗಾಗಿ ಶೋಧ ಮುಂದುವರಿದಿದೆ.
ಸೈಫ್ ಮನೆಯಿಂದ ಬಾಂದ್ರಾ ರೈಲ್ವೆ ನಿಲ್ದಾಣದವರೆಗೂ ಇರುವ ಹಲವು ಸಿಸಿಟಿವಿಗಳನ್ನು ಪರಿಶೀಲಿಸಿರುವ ಪೊಲೀಸರಿಗೆ ಆರೋಪಿ ಹಲವು ಬಾರಿ ಬಟ್ಟೆ ಬದಲಿಸಿ ತಲೆಮರಿಸಿಕೊಂಡಿದ್ದಾರೆ. ಕಡೆಯದಾಗಿ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದು, ಆತ ಮುಂಬೈನಿಂದ ಕಾಲ್ಕಿತ್ತಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆ ಹಲವು ಆಕ್ಷೇಪ ಕೇಳಿ ಬಂದಿವೆ. ಇನ್ನೂ ಈ ಮಹತ್ವದ ಅವಧಿಯಲ್ಲಿ ಆರೋಪಿ ಮುಂಬೈ ಖಾಲಿ ಮಾಡಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಸದ್ಯ 20ಕ್ಕೂ ಅಧಿಕ ತಂಡ ರಚಿಸಿರುವ ಪೊಲೀಸರುವ ಚಾಕು ಇರಿತ ಹಂತಕನ ಬೆನ್ನು ಬಿದ್ದಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿಕೋರ ಮನೆಯ ಒಳನುಗ್ಗಿದ ವೇಳೆ ಕಿರಿಯ ಮಗ ಜಹಾಂಗೀರ್ (ಜೆಹ್) ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಮೊದಲು ಮನೆಯಲ್ಲಿ ಕೆಲಸ ಮಾಡುವ ಸಹಾಯಕಿ ಗುರುತಿಸಿದಳು. ಈ ವೇಳೆ, ಮಾತಿನ ಚಕಮಕಿ ನಡೆಯಿತು. ಇಬ್ಬರ ಗದ್ದಲದ ಬಳಿಕ ಎದ್ದು ಬಂದ ಸೈಫ್ ಮಹಿಳೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದರು. ಈ ವೇಳೆ, ದಾಳಿಕೋರ ಸೈಫ್‌ಗೆ ಚಾಕು ಇರಿಯಲು ಆರಂಭಿಸಿದ. ನಾವು ಈ ಗದ್ದಲದ ನಡುವೆ ಮಕ್ಕಳನ್ನು ಸುರಕ್ಷಿತ ಕೊಠಡಿಗೆ ಕಳುಹಿಸಿದ್ದರು. ಕಾರು ಚಾಲಕ ಇಲ್ಲದ ಹಿನ್ನೆಲೆ ಸೈಫ್ ಅವರು ಮಗ ತೈಮೂರ್ ಜೊತೆಗೆ ಆಸ್ಪತ್ರೆ ಆಗಮಿಸಿದರು. ಆ ಸಂದರ್ಭದಲ್ಲಿ ಮನೆಯಲ್ಲಿ ತೆರೆದ ಸ್ಥಳದಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ದಾಳಿಕೋರ ಮುಟ್ಟಲಿಲ್ಲ. ಹೀಗಾಗಿ ಕಳ್ಳತನದ ಉದ್ದೇಶ ಇತ್ತಾ? ಇಲ್ವಾ? ಎನ್ನುವ ಗೊಂದಲ ಇದೆ ಎಂದು ತಿಳಿಸಿದ್ದಾರೆ.
ಇನ್ನು ಪೊಲೀಸರು ಸೈಫ್ ಅಲಿ ಖಾನ್‌ನ ಆಟೋ ಮೂಲಕ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಚಾಲಕ ಭಜನ್ ಸಿಂಗ್ ರಾಣಾ ವಿವರಿಸಿದ್ದಾರೆ. ಸೈಫ್ ಅಲಿ ಖಾನ್ ನಿವಾಸ ಸದ್ಗುರು ದರ್ಶನ ಭವನದ ಬಳಿ ನಾನು ಸಾಗುತ್ತಿದ್ದಾಗ ಮಹಿಳೆ ಮತ್ತು ಕೆಲವರು ಆಟೋ ನಿಲ್ಲಿಸುವಂತೆ ಕೇಳಿದರು. ನಾನು ಆಟೋ ನಿಲ್ಲಿಸಿದೆ. ಅಲ್ಲಿಂದೆ ರಕ್ತದ ಮಡುವಿನಲ್ಲಿದ್ದ ಅವರನ್ನು ಕುತ್ತಿಗೆ ಮತ್ತು ಬೆನ್ನಿನ ಮೇಲೆ ಗಾಯಗಳಾಗಿರುವುದನ್ನು ನಾನು ನೋಡಿದೆ, ಆದರೆ ಕೈ ಗಾಯದ ಬಗ್ಗೆ ಗಮನ ಹರಿಸಲಿಲ್ಲ. ಅಲ್ಲಿಂದ ಲೀಲಾವತಿ ಆಸ್ಪತ್ರೆಗೆ ತೆರಳಲು ಎಷ್ಟು ಸಮಯ ಬೇಕು ಎಂದರು ನಾನು 8-10 ನಿಮಿಷ ಎಂದೆ. ಆಸ್ಪತ್ರೆ ತಲುಪುತ್ತಿದ್ದಂತೆ ಅವರು ಇಳಿದು ಹೋದರು. ನಾನು ಅವರಿಂದ ಬಾಡಿಗೆಯೂ ಪಡೆಯಲಿಲ್ಲ. ಆಸ್ಪತ್ರೆ ಪ್ರವೇಶ ಮಾಡ್ತಿದ್ದಂತೆ ನಾನು ಸೈಫ್ ಅಲಿ ಖಾನ್ ಸ್ಟ್ರೇಚರ್ ತನ್ನಿ ಎಂದು ಕೂಗಿದರು. ಆಗಲೇ ಅವರು ಸೈಫ್ ಅಲಿ ಖಾನ್ ಎಂದು ತಿಳಿಯಿತು.
ಹೀಗೆ ಎಲ್ಲ ಹೇಳಿಕೆ ಸಂಗ್ರಹಿಸುತ್ತಿರುವ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಆತನ ಉದ್ದೇಶ ಏನಾಗಿರಬಹುದು ಎಂದು ಹುಡುಕಾಡುತ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಡಿಸಿಎಂ ಅಜಿತ್ ಪವಾರ್ ಮಾತನಾಡಿದ್ದು, ಆರೋಪಿಯನ್ನು ಪೊಲೀಸರು ಶೀಘ್ರದಲ್ಲಿ ಬಂಧಿಸಲಿದ್ದಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಸೈಫ್ ಮೇಲಿನ ದಾಳಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಂತಕನ ಉದ್ದೇಶ ಕಳ್ಳತನವಾ? ಮಕ್ಕಳು ಅವನ ಟಾರ್ಗೆಟ್ ಆಗಿತ್ತಾ? ಅಥವಾ ಸೈಫ್ ಹತ್ಯೆಗೆ ನಡೆದ ಸಂಚಾ ಎನ್ನುವ ಗೊಂದಲಗಳು ಸೃಷ್ಠಿಯಾಗಿವೆ. ಎಲ್ಲದಕ್ಕೂ ಪೊಲೀಸ್ ತನಿಖೆಯ ಬಳಿಕ ಉತ್ತರ ಸಿಗಲಿದೆ.
Comments