ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.) ಸಮಿತಿಯ ವತಿಯಿಂದ ಡಿ.28 ಹಾಗೂ 29 ರಂದು ಎರಡನೇ ವರ್ಷದ ವೈಭವದ “ಶ್ರೀನಿವಾಸ ಕಲ್ಯಾಣೋತ್ಸವ” ಧರ್ಮ ಸಂಗಮ
ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.) ಸಮಿತಿಯ ವತಿಯಿಂದ ಡಿ.28 ಹಾಗೂ 29 ರಂದು ಎರಡನೇ ವರ್ಷದ ವೈಭವದ “ಶ್ರೀನಿವಾಸ ಕಲ್ಯಾಣೋತ್ಸವ” ಧರ್ಮ ಸಂಗಮ

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್(ರಿ.) ಪುತ್ತೂರು ಇವುಗಳ ಸಹಭಾಗಿತ್ವದಲ್ಲಿ ಡಿ.28 ಹಾಗೂ 29 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಲಿರುವ “ಶ್ರೀನಿವಾಸ ಕಲ್ಯಾಣೋತ್ಸವ” ದ ಪತ್ರಿಕಾಗೋಷ್ಠಿಯು ದರ್ಬೆ ಸುಭದ್ರ ಕಲಾ ಮಂದಿರದಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ರವರು ಮಾತನಾಡಿ “ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ, ವೈದ್ಯಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸರ್ವರ ಸಹಕಾರದೊಂದಿಗೆ ಸೇವೆ ಮಾಡುತ್ತಿದೆ. ಧಾರ್ಮಿಕ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ರೀತಿ ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಭಕ್ತರ ಅಪೇಕ್ಷೆಯಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದ್ದು, ಎರಡು ದಿವಸಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.27 ರಂದು ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಗೆ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದ್ದು, ಎಲ್ಲಾ ಗ್ರಾಮಗಳಲ್ಲಿ ಸಂಗ್ರಹಣೆಯಾದ ಹೊರೆ ಕಾಣಿಕೆಯನ್ನು ಮೆರವಣಿಗೆಯ ಮೂಲಕ ತರಲಾಗುವುದು. ಡಿ.28 ರಂದು ಸಂಜೆ 4:00 ಗಂಟೆಯಿಂದ ಬೊಳುವಾರಿನಲ್ಲಿ ಶ್ರೀ ದೇವರನ್ನು ಬರಮಾಡಿಕೊಂಡು ವೈಭವದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಬಳಿಕ ಭವ್ಯ ವೇದಿಕೆಯ ಮಂಟಪದಲ್ಲಿ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಸ್ವಾಗತ, ಈಶ ಮಂಟಪಕ್ಕೆ ಆಗಮನ ಕಾರ್ಯಕ್ರಮ ನಡೆದು ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಜೊತೆಗೆ ಹಿಂದೂ ಸಮಾಜದ ಕಲ್ಯಾಣವಾಗಬೇಕೆಂಬ ಮಹದಾಸೆಯಿಂದ ಸಂಜೆ 6:00 ಗಂಟೆಗೆ ಧರ್ಮ ಸಂಗಮ ಧಾರ್ಮಿಕ ಸಭೆ ನಡೆಯಲಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು, ಉಡುಪಿ ಕಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು, ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾನ ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ವಿಟ್ಲ ಶ್ರೀ ಯೋಗೀಶ್ವರ ಮಠದ ಶ್ರೀ ಯೋಗಿ ಶ್ರದ್ಧಾನಂದ ಜೀ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಶ್ರೀ ಕೃಷ್ಣ ಗುರೂಜಿ, ಬೆಳ್ತಂಗಡಿ ಆರಿಕೋಡಿ ಬೆಳಾಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆರಿಕೋಡಿ ರವರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8:00 ಗಂಟೆಗೆ ಗಾನಸಿರಿ ಡಾ| ಕಿರಣ್ ಕುಮಾರ್ ಪುತ್ತೂರು ಇವರಿಂದ ಭಕ್ತಿ ಗಾನಸುಧೆ ನಡೆಯಲಿದ್ದು, ರಾತ್ರಿ 8:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9:00 ಗಂಟೆಗೆ ತೆಲಿಕೆದ ಬೊಳ್ಳಿ ಡಾ| ದೇವಿದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಚಾಪರ್ಕ ಕಲಾವಿದರಿಂದ 921ನೇ ಪ್ರದರ್ಶನದ ಅಂಗವಾಗಿ ಪುದರ್ ದೀತಿಜಿ ತುಳು ನಾಟಕ ಪ್ರದರ್ಶನ ನಡೆಯಲಿದ್ದು, ಡಿ.29 ರಂದು ಬೆಳಿಗ್ಗೆ 6:30 ರಿಂದ ಸುಪ್ರಭಾತ ಪೂಜಾ ಸೇವೆ, ಮದ್ಯಾಹ್ನ 12:30 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಮದ್ಯಾಹ್ನ 2:30 ರಿಂದ ಭಜನಾ ತಂಡಗಳಿಂದ ಭಜನೋತ್ಸವ, ಸಂಜೆ 4:00 ಗಂಟೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಕಳೆದ ಬಾರಿ ಭಕ್ತಾದಿಗಳ ಸಂಖ್ಯೆಯನ್ನು ನೋಡಿಕೊಂಡು ಈ ಬಾರಿ ಸುಮಾರು 75 ಸಾವಿರ ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ 25 ಸಾವಿರಕ್ಕೂ ಮಿಕ್ಕಿ ಲಾಡು ಸೇವೆಗೆ ಸಿದ್ದಪಡಿಸಲಾಗುತ್ತಿದೆ. ಕಳೆದ ವರ್ಷ ನಮಗೆ ಸಮಯದ ಕೊರತೆ ಇತ್ತು. ಈ ಬಾರಿ ಡಿ.20 ರ ಒಳಗಾಗಿ ಎಲ್ಲಾ ಬೂತ್ ಸಮಿತಿಗಳಿಂದ ಸೇವಾ ರಶೀದಿಯನ್ನು ನೊಂದಾಯಿಸಲು ತಿಳಿಸಿದ್ದೇವೆ. ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆಯಲಿದೆ. ಹಾಗಾಗಿ ಶ್ರೀನಿವಾಸ ದೇವರಿಗೆ ಎತ್ತರದ ವೇದಿಕೆ ಮತ್ತು ಅದರ ಕೆಳಗೆ ಇನ್ನೊಂದು ವೇದಿಕೆ ನಿರ್ಮಾಣ ಮಾಡಲಾಗುವುದು. ಒಟ್ಟು 86 ಚದರ ಅಡಿಯ ವೇದಿಕೆ ನಿರ್ಮಾಣ ಮಾಡಲಾಗುವುದು. ಶ್ರೀನಿವಾಸ ಕಲ್ಯಾಣೋತ್ಸವದ ಸೇವಾ ಚಟುವಟಿಕೆಯ ಹಿನ್ನೆಲೆಯಲ್ಲಿ ಮತ್ತು ವಿವಿಧ ಪೂಜಾ ಸೇವಾ ರಶೀದಿ ಮಾಡಿಸುವ ಭಕ್ತರ ಸಹಕಾರಕ್ಕಾಗಿ ಡಿ.15 ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರದ ಮುಂದೆ ಸೇವಾ ಕಾರ್ಯಾಲಯ ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ಚಪ್ಪರ ಮುಹೂರ್ತಕ್ಕೆ ಭೂಮಿ ಪೂಜೆ ನೆರವೇರಲಿದೆ. 1 ವರ್ಷದ ಅವಧಿಯಲ್ಲಿ ಸುಮಾರು 20 ಲಕ್ಷಕ್ಕೂ ಮಿಕ್ಕಿ ಸೇವಾ ಚಟುವಟಿಕೆಗಳನ್ನು ಟ್ರಸ್ಟ್ ಮುಖಾಂತರ ಮಾಡಿದ್ದೇವೆ. ಅಸಹಾಯಕರಿಗೆ ಟ್ರಸ್ಟ್ ಮೂಲಕ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಆರೋಗ್ಯ ಸಮಸ್ಯೆಯಲ್ಲಿರುವ ಎರಡು ಮೂರು ಮಂದಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದೇವೆ. ವೈದ್ಯಕೀಯ ಶಿಬಿರ ಹಾಗೂ ಕಳೆದ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಧಾರ್ಮಿಕ ಶಿಬಿರ ಆಯೋಜನೆ ಮಾಡಿ ಧರ್ಮ ಜಾಗೃತಿ ಕಾರ್ಯಕ್ರಮ ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸುಳ್ಯ, ಕಡಬ ಭಾಗದಲ್ಲಿ ಸಂಪರ್ಕ ಮಾಡಿ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆಯನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಟ್ರಸ್ಟ್ ನ ಬೂತ್ ಸಮಿತಿಗಳಿಂದ ಮಾಡಲಾಗುತ್ತಿದೆ. ಜೊತೆಗೆ ಪಕ್ಷ, ಸಂಘಪರಿವಾರವನ್ನು ಸೇರಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಭೆ ಮಾಡುತ್ತಿದ್ದೇವೆ. ಒಂದು ವಾರದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಶಾಂಕ್ ಕೊಟೇಚಾ, ಅಧ್ಯಕ್ಷರಾದ ಶಿವಪ್ರಸಾದ್ ಇಜ್ಜಾವು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಮಹೇಂದ್ರವರ್ಮ ಭಜತ್ತೂರು, ಸಹಸಂಚಾಲಕರಾದ ಮನೀಶ್ ಕುಲಾಲ್, ಪ್ರಚಾರ ಹಾಗೂ ಮಾಧ್ಯಮ ಸಮಿತಿಯ ಸಂಚಾಲಕರಾದ ನವೀನ್ ರೈ ಪಂಜಳ ಉಪಸ್ಥಿತರಿದ್ದರು.
Comments